ಜನರ ತೆರಿಗೆ ಹಣದಲ್ಲಿ ನಿರ್ಮಿಸಿದ ಶೌಚಾಲಯ ತಕ್ಷಣ ಸಾರ್ವಜನಿಕರ ಬಳಕೆಗೆ ತೆರೆಯಿರಿ; ಇಲ್ಲವಾದರೆ ಕುರ್ಚಿ ಖಾಲಿ ಮಾಡಿ: ಪುರಸಭೆ ಅಧಿಕಾರಿಗಳಿಗೆ ಕರವೇ ಸ್ವಾಭಿಮಾನಿ ಬಣ ಖಡಕ್ ಎಚ್ಚರಿಕೆ
ನಮ್ಮೂರ ನ್ಯೂಸ್ ವರದಿ : ದಿನಾಂಕ ಆಗಸ್ಟ್ 1: ಕುಶಾಲನಗರ, : ಕೊಡಗು ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿಯಾದ ಕುಶಾಲನಗರ ಪುರಸಭೆ ಕಚೇರಿಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿದಿನ ಕಂದಾಯ ಪಾವತಿ, ಖಾತೆ ಬದಲಾವಣೆ ಸೇರಿದಂತೆ ವಿವಿಧ ಸರ್ಕಾರಿ ಕೆಲಸಗಳಿಗಾಗಿ ನೂರಾರು ಸಾರ್ವಜನಿಕರು ಪುರಸಭೆ ಕಚೇರಿಗೆ ಆಗಮಿಸುತ್ತಿದ್ದಾರೆ. ಆದರೆ, ಸಾರ್ವಜನಿಕರ ಬಳಕೆಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಈ ಸಮಸ್ಯೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪುರಸಭೆ ಆವರಣಕ್ಕೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪುರಸಭೆಯ ಕೆಳಭಾಗದ ಪಾರ್ಕಿಂಗ್ ಕಟ್ಟಡದಲ್ಲಿ ಸಾರ್ವಜನಿಕರ ತೆರಿಗೆ ಹಣದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಶೌಚಾಲಯ ಕಟ್ಟಡ ಸಂಪೂರ್ಣವಾಗಿ ಸಿದ್ಧವಾಗಿದ್ದರೂ, ಅದನ್ನು ಸಾರ್ವಜನಿಕರ ಬಳಕೆಗೆ ತೆರೆಯದೇ ಬೀಗ ಹಾಕಿರುವುದು ಬೆಳಕಿಗೆ ಬಂದಿದೆ.
ಕಾಮಗಾರಿ ಪೂರ್ಣಗೊಂಡು ಬಳಕೆಗೆ ಸಿದ್ಧವಾಗಿರುವ ಶೌಚಾಲಯವನ್ನು ಉದ್ಘಾಟನೆ ಹೆಸರಿನಲ್ಲಿ ಅಥವಾ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟು ಸಾರ್ವಜನಿಕರಿಗೆ ಮುಕ್ತಗೊಳಿಸದೆ ಇರಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ತಿಳಿಸಿದೆ.
ಪ್ರಸ್ತುತ ಮಳೆಗಾಲದ ಸಂದರ್ಭದಲ್ಲಿ ವಿವಿಧ ಕೆಲಸಗಳಿಗಾಗಿ ಗಂಟೆಗಟ್ಟಲೆ ಕಚೇರಿಯಲ್ಲಿ ಕಾಯುವ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಹಾಗೂ ಹಿರಿಯ ನಾಗರಿಕರು ಶೌಚಾಲಯದ ಕೊರತೆಯಿಂದ ತೀವ್ರ ಮುಜುಗರ ಮತ್ತು ಸಂಕಷ್ಟ ಅನುಭವಿಸುತ್ತಿದ್ದಾರೆ. "ಜನರ ಸಮಸ್ಯೆಗಳಿಗೆ ಸ್ಪಂದಿಸದ ಪುರಸಭೆ ಆಡಳಿತಕ್ಕೆ ಮಾನವೀಯತೆ ಇಲ್ಲವೇ?" ಎಂದು ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.
"ಜನರ ತೆರಿಗೆ ಹಣದಲ್ಲಿ ವೇತನ ಪಡೆಯುವ ಅಧಿಕಾರಿಗಳು ಸಾರ್ವಜನಿಕರ ಮೂಲಭೂತ ಅಗತ್ಯಗಳನ್ನು ನಿರ್ಲಕ್ಷಿಸುವುದು ಖಂಡನೀಯ. ಸಾರ್ವಜನಿಕರ ಹಣದಲ್ಲಿ ನಿರ್ಮಿಸಿರುವ ಶೌಚಾಲಯವನ್ನು ಕೂಡಲೇ ಸಾರ್ವಜನಿಕರ ಬಳಕೆಗೆ ತೆರೆಯಬೇಕು. ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು," ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಪದಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಸಂಚಾಲಕ ಸತೀಶ್, ಕುಶಾಲನಗರ ತಾಲ್ಲೂಕು ಸಂಚಾಲಕ ವಿ.ಪಿ. ಚಂದ್ರಣ್ಣ, ನಂಜಪ್ಪ, ರಮೇಶ್ ಹಾಗೂ ವಿಲ್ಸನ್ ಉಪಸ್ಥಿತರಿದ್ದರು.