“ಮುಖ್ಯನ್ಯಾಯಮೂರ್ತಿಗಳ ಅವಮಾನ ಪ್ರಕರಣದಲ್ಲಿ ಕಠಿಣ ಕ್ರಮಕ್ಕೆ DSS ಪರಿವರ್ತನವಾದ ರಾಜ್ಯ ಸಂಚಾಲಕರು ಅಂಬಣ್ಣ ಕುಕನೂರ್ ಆಗ್ರಹ”
ನಮ್ಮೂರು ನ್ಯೂಸ್ ವರದಿ ನವದೆಹಲಿ, ಅಕ್ಟೋಬರ್ 6, 2025:
ಸುಪ್ರೀಂ ಕೋರ್ಟ್ನ ಗೌರವಾನ್ವಿತ ಮುಖ್ಯನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿದ ಘಟನೆಗೆ DSS (ಪರಿವರ್ತನವಾದ) ಸಂಘಟನೆಯು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಅಂಬಣ್ಣ ಕುಕನೂರ್ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ
“ಮುಖ್ಯನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿರುವ ಆ ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯಗಳು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಗೌರವವನ್ನು ಕುಗ್ಗಿಸುವ ಪ್ರಯತ್ನವಾಗಿವೆ.”
“ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧರ ವಿಚಾರಧಾರೆಯ ಅನುಯಾಯಿಯಾಗಿರುವ ದಲಿತ ಸಮುದಾಯದ ಗೌರವನೀಯ ವ್ಯಕ್ತಿ. ಅವರು ತಮ್ಮ ಅರ್ಹತೆ, ಪರಿಶ್ರಮ ಮತ್ತು ನಿಷ್ಠೆಯಿಂದ ಉನ್ನತ ಹುದ್ದೆಗೆ ಏರಿದ್ದಾರೆ. ಇಂದಿನ ಈ ಘಟನೆ, ಸಂವಿಧಾನ ಜಾರಿಗೆ ಬಂದ 75 ವರ್ಷಗಳಾದರೂ ಮನುವಾದಿ ಮನೋಭಾವ ಇನ್ನೂ ಕೆಲವು ಮನಸ್ಸುಗಳಲ್ಲಿ ಜೀವಂತವಾಗಿರುವುದನ್ನು ತೋರಿಸುತ್ತದೆ.”
“ನ್ಯಾಯಮೂರ್ತಿಗಳು ಯಾವ ಪಕ್ಷ ಅಥವಾ ಧರ್ಮಕ್ಕೆ ಸೇರಿದವರಲ್ಲ; ಅವರು ದೇಶದ ಸಂವಿಧಾನದ ಪ್ರತಿನಿಧಿಗಳು. ಆದ್ದರಿಂದ ಎಲ್ಲ ವರ್ಗದ, ಧರ್ಮದ, ಪಕ್ಷದ ಜನರು ಇಂತಹ ಅಸಹಿಷ್ಣುತೆಯ ಕೃತ್ಯಗಳನ್ನು ಒಗ್ಗಟ್ಟಿನಿಂದ ಖಂಡಿಸಬೇಕು.”
ಸಂಘಟನೆಯು ಸರ್ಕಾರದ ಮುಂದೆ ಕೆಳಗಿನ ಆಗ್ರಹಗಳನ್ನು ಮಂಡಿಸಿದೆ:
ಶೂ ಎಸೆದ ವಕೀಲನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಜೀವಾವಧಿ ಶಿಕ್ಷೆ ವಿಧಿಸಬೇಕು.
ಆ ವಕೀಲನ ಬಾರ್ ಕೌನ್ಸಿಲ್ ಸದಸ್ಯತ್ವವನ್ನು ಶಾಶ್ವತವಾಗಿ ರದ್ದುಪಡಿಸಬೇಕು.
ಕೇಂದ್ರ ಸರ್ಕಾರವು ಸ್ವಯಂ ಪ್ರೇರಿತವಾಗಿ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು.
ಮುಂದಿನ ದಿನಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ನ್ಯಾಯಮೂರ್ತಿಗಳು, ಮತ್ತು ನ್ಯಾಯಾಲಯಗಳಿಗೆ ಅವಮಾನ ಮಾಡುವವರ ವಿರುದ್ಧ ದೇಶದ್ರೋಹದ ಕಾನೂನು ಪ್ರಾವಧಾನವನ್ನು ಸೇರಿಸುವ ಹೊಸ ಕಾನೂನು ರೂಪಿಸಬೇಕು.
“ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಒಬ್ಬಂಟಿಯಲ್ಲ ದೇಶದ ಕೋಟ್ಯಂತರ ಜಾತ್ಯತೀತ, ಸಂವಿಧಾನ ನಂಬಿಕೆಯ ನಾಗರಿಕರು ಅವರ ಬೆಂಬಲದಲ್ಲಿ ನಿಂತಿದ್ದಾರೆ” ಎಂದು ತಿಳಿಸಿದಾರೆ
📑.. @✍️ ವರದಿ DSS ಪರಿವರ್ತನವಾದ ಸಂಘಟನೆಯು, ರಾಜ್ಯ ಸಂಘಟನಾ ಸಂಚಾಲಕರು ಅಂಬಣ್ಣ ಕುಕನೂರ್