ಕತ್ತರಘಟ್ಟ ಗ್ರಾಮದ ದಲಿತ ಯುವಕನ ಅಮಾನುಷ ಬರ್ಬರ ದಹನ ಪ್ರಕರಣವನ್ನು ಖಂಡಿಸಿ, ಆತ್ಮಹತ್ಯೆ ಕೇಸಿನ ಬದಲು ಕೊಲೆ ಪ್ರಕರಣ ದಾಖಲು ಮಾಡಲು ಆಗ್ರಹಿಸಿ, ಕೆ.ಆರ್.ಪೇಟೆ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟ ಮತ್ತು ವಿವಿಧ ಜನಪರ ಪ್ರಗತಿಪರ ಸಂಘಟನೆಗಳ ವತಿಯಿಂದ ದಿನಾಂಕ : 27-05-2025 ರಂದು ಮಂಗಳವಾರ ಪ್ರತಿಭಟನಾ ಮೆರವಣಿಗೆ
ಮಂಡ್ಯ ಜಿಲ್ಲೆ: ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಅವರನ್ನು ಹುಲ್ಲಿನ ಮೆದೆಗೆ ದೂಡಿ ಸಜೀವವಾಗಿ ಸುಟ್ಟಿರುವ ದುರ್ಘಟನೆ ದಿನಾಂಕ: 17-05-2025ರಂದು ನಡೆದಿದ್ದು, ಸದರಿ ಪ್ರಕರಣವನ್ನು ಅತ್ಯಹತ್ಯೆ ಎಂದು ದೂರು ದಾಖಲಿಸಿಕೊಂಡಿರುವ ಪೊಲೀಸ್ ಇಲಾಖೆಯ ಕರ್ತವ್ಯಲೋಪವನ್ನು ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.
ತನ್ನ ಜಮೀನಿನಲ್ಲಿ ಕಳೆದ ಐದಾರು ವರ್ಷಗಳಿಂದ ಆಕ್ರಮವಾಗಿ ಹುಲ್ಲುಮೆದೆ ಹಾಕಿದ್ದಲ್ಲದೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ದಿನಾಂಕ: 16-05-2025 ರಂದು ಜಯಕುಮಾರ ಕೆ.ರ್.ಪೇಟೆ ಪೊಲೀಸ್ ಠಾಣೆಯಲ್ಲಿ ಅನಿಲ್ ಕುಮಾರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ದೂರು ನೀಡಿದ ಮರುದಿನವೇ ಈ ಅಮಾನುಷ ಕೊಲೆ ನಡೆದಿದೆ ರೌಡಿಶೀಟರ್ ಹಾಗೂ ಪೋಕ್ಲಿ ಕಾಯ್ದೆಯಡಿ ಸೆರೆವಾಸ ಕಂಡಿದ್ದ ಅನಿಲ್ ಕುಮಾರ್ ಬಗ್ಗೆ ಅರಿವಿದ್ದ ಸ್ಥಳೀಯ ಪೊಲೀಸರು ಸಕಾಲಿಕ ಮುನ್ನೆಚರಿಕೆ ವಹಿಸದ ಕಾರಣ ಅಮಾಯಕ ದಲಿತನೊಬ್ಬನ ದಾರುಣ ಹತ್ಯೆ ನಡೆದಿದೆ.
ಜಯಕುಮಾರ್ ಅವರ ಅನಕ್ಷರಸ್ಥ ಪತ್ನಿ ಲಕ್ಷ್ಮಿಯವರು ಗಂಡನ ಕೊಲೆಯಿಂದ ಆಘಾತಗೊಂಡು ಆರೋಪಿಯ ಬಂಧನಕ್ಕೆ ಆಗ್ರಹಿಸಿ ಕೊಟ್ಟಿರುವ ದೂರನ್ನು "ನನ್ನ ಗಂಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ತಿರುಚಿ ಕೇಸು ದಾಖಲಿಸಿರುವ ಪೊಲೀಸರ ಈ ಕುಕೃತ್ಯಕ್ಕೆ ಕ್ಷಮೆ ಎಂಬುದು ಇರಬಾರದು. ಜಯಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಪ್ರಬಲ ಕಾರಣಗಳೂ ಇರಲಿಲ್ಲ. ಅಲ್ಲದೆ ಶವ ಸಿಕ್ಕ ಸ್ಥಳ ಮತ್ತು ಅದರ ಸ್ಥಿತಿಗತಿಗಳನ್ನು ಪರಿಶೀಲಿಸಿದರೆ ಸ್ವಯಂ ಆತ್ಮಹತ್ಯೆಗೆ ಯತ್ನಿಸಿರುವ ಯಾವ ಕುರುಹು - ಗುರುತುಗಳೂ ಕಂಡು ಬರುವುದಿಲ್ಲ, ಸುಟ್ಟು ಆರೆಬೆಂದ ಶವದ ದುರವಸ್ಥೆಯ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸಿದರೆ ಕೊಲೆ ಮಾಡಿ ಹುಲ್ಲಿನ ಮೆದೆಯ ಬೆಂಕಿಗೆ ಎಸೆಯಲಾಗಿದೆ ಎಂಬ ಅಂಶ ಕಣ್ಣಿಗೆ ರಾಚುವಂತಿದೆ.
ಈ ದುರ್ಘಟನೆಯ ಹಿಂದಿರುವ ನಿಜ ಸಂಗತಿಗಳನ್ನು ಸ್ಥಳ ಮಹಜರಿನ ಮೂಲಕ ಗೋಚರಿಸುವ ಪುರಾವೆಗಳನ್ನು ಸರಿಯಾಗಿ ತಿಳಿದುಕೊಂಡು ಮೃತ ಜಯಕುಮಾರ್ ಪತ್ನಿಯ ದೂರನ್ನು ಗಂಭೀರವಾಗಿ ಪರಿಗಣಿಸದೆ ಪೊಲೀಸ್ ಅಧಿಕಾರಿಗಳು ಕೊಲೆಯನ್ನು ಆತ್ಮಹತ್ಯೆ ಪ್ರಕರಣವೆಂದು ದೂರು ದಾಖಲು ಮಾಡಿಕೊಂಡಿರುವುದು ಆಘಾತಕ್ಕೊಳಗಾಗಿರುವ ಮೃತನ ಪತ್ನಿ ಲಕ್ಷ್ಮಿಯ ಕುಟುಂಬಕ್ಕಷ್ಟೇ ಅಲ್ಲದ ಅಲ್ಲದೆ ಇಡೀ ದಲಿತ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಘೋರ ಅನ್ಯಾಯವಾಗಿದೆ. "
ಸಾರ್ವಜನಿಕರ ಆಕ್ರೋಶ, ದಲಿತ ಸಂಘಟನೆಗಳ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಆರು ದಿನಗಳ ತರುವಾಯ ಮೇ. 22ರ ರಾತ್ರಿ ಆರೋಪಿ ಅನಿಲ್ಕುಮಾರ್ನನ್ನು ಬಂಧಿಸಲಾಗಿದೆ. ಆದರೆ ಅತ್ಮಹತ್ಯೆ ಎಂದು ದಾಖಲಾಗಿರುವ ದೂರನ್ನು ಕೊಲೆ ಎಂದು ಪರಿಗಣಿಸಿ ಸಮಗ್ರ ತನಿಖೆಗೊಳಪಡಿಸಿದಾಗ ಮಾತ್ರ ನಿಜಸಂಗತಿ ಏನೆಂದು ಸಮಾಜಕ್ಕೆ ತಿಳಿಸಲು ಪೊಲೀಸರಿಗೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾಗಲು ಸಾಧ್ಯವಾಗುತ್ತದೆ.
ಸರ್ಕಾರಕ್ಕೆ ನಮ್ಮ ಆಗ್ರಹಗಳು
ಬಂಧಿತ ಅನಿಲ್ ಕುಮಾರ್ ನನ್ನು ತೀವ್ರ ತನಿಖೆಕ್ಕೊಳಪಡಿಸಿ ಹೊರಬಂದ ಸತ್ಯಾಂಶದ ಆಧಾರದ ಮೇಲೆ ಕೊಲೆ ಮೊಕದ್ದಮೆ ದಾಖಲಿಸಬೇಕು.
ದಲಿತರ ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕರ್ತವ್ಯಲೋಪ ಎಸಗಿರುವ ಪೊಲೀಸರನ್ನು ಅಮಾನತ್ತು ಮಾಡಬೇಕು.
ಫಾರಂ ನಂ. 57ರಲ್ಲಿ ಎರಡೂವರೆ ಎಕರೆ ಬಗರ್ಹುಕುಂ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ಜಯಕುಮಾರ್ ಕುಟುಂಬಕ್ಕೆ ಸದರಿ ಭೂಮಿಯನ್ನು ಮಂಜೂರು ಮಾಡಿಕೊಡಬೇಕು.
ಈ ಹಿಂದೆ ಕೋಮು ಆಯಾಮದಲ್ಲಿ ಕೊಲೆಗಳಾದ ಸಂದರ್ಭದಲ್ಲಿ ಯಾವುದೇ ತನಿಖೆ ಮಾಡದೆ ರಾಜ್ಯ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವನ್ನು ನೀಡಿದೆ. ಇದೇ ಮಾದರಿಯಲ್ಲಿ ಸಂತ್ರಸ್ಥ ದಲಿತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ಬಿಡುಗಡೆ ಮಾಡಬೇಕು. ಹಾಗೂ ಎರಡು ಎಳೆಯ ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ಲಕ್ಷ್ಮಿ ಅವರಿಗೆ ಸರ್ಕಾರಿ ಕೆಲಸವನ್ನು ನೀಡಬೇಕು.
📝... @✍️ ವರದಿ ಅಂಬಣ್ಣ ಕುಕನೂರ್