ಬೇವೂರು ಹೋಬಳಿ ವಿಸ್ತರಣಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ತೊಂದರೆ ಆನ್ಲೈನ್ ಅರ್ಜಿಗಳನ್ನು ಹೊರಗಿನ ಸೆಂಟರ್ಗಳಲ್ಲಿ ಸಲ್ಲಿಸುವಂತೆ ಒತ್ತಾಯ ಆರೋಪ
ನಮ್ಮೂರು ನ್ಯೂಸ್ ವರದಿ : ಯಲಬುರ್ಗಾ ಹೋಬಳಿ ಬೇವೂರು ವಿಸ್ತರಣಾ ಕೇಂದ್ರ, ಇಲ್ಲಿ ಜಾತಿ, ಆದಾಯ, ವಾಸಸ್ಥಳ ಸೇರಿದಂತೆ ವಿವಿಧ ಸರ್ಕಾರಿ ಪ್ರಮಾಣಪತ್ರ ಹಾಗೂ ಸಾರ್ವಜನಿಕ ಸೇವೆಗಳಿಗಾಗಿ ಅರ್ಜಿ ಸಲ್ಲಿಸಲು ಆಗಮಿಸುವ ಜನರಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರಿಗೆ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸುವ ಬದಲು, ಹೊರಗಿನ ಆನ್ಲೈನ್ ಸೆಂಟರ್ಗಳಲ್ಲಿ ಅರ್ಜಿ ಸಲ್ಲಿಸುವಂತೆ ಸಿಬ್ಬಂದಿಗಳು ಹೇಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಇದರಿಂದ ಗ್ರಾಮೀಣ ಭಾಗದಿಂದ ಸರ್ಕಾರಿ ಸೇವೆ ಪಡೆಯಲು ಬರುವ ಬಡವರು ಹಾಗೂ ಸಾಮಾನ್ಯ ನಾಗರಿಕರು ಅನಗತ್ಯವಾಗಿ ಹೊರಗಿನ ಆನ್ಲೈನ್ ಕೇಂದ್ರಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎನ್ನಲಾಗಿದೆ.
ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ಸುಲಭವಾಗಿ ಹಾಗೂ ಪಾರದರ್ಶಕವಾಗಿ ದೊರೆಯುವಂತೆ ಮಾಡುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದೆ. ಆದ್ದರಿಂದ ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಬೇವೂರು ಹೋಬಳಿ ವಿಸ್ತರಣಾ ಕೇಂದ್ರಕ್ಕೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲುಗಳನ್ನು ಪರಿಶೀಲಿಸಿ, ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಲ್ಲದೆ, ಕೇಂದ್ರದಲ್ಲಿ ಕುಡಿಯುವ ನೀರು, ಕುಳಿತುಕೊಳ್ಳುವ ವ್ಯವಸ್ಥೆ, ಅರ್ಜಿ ಸಲ್ಲಿಸಲು ಅಗತ್ಯ ಮಾರ್ಗದರ್ಶನ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಸಾರ್ವಜನಿಕರ ಆರೋಪಗಳು ನಿಜವಾಗಿದ್ದರೆ, ಸಂಬಂಧಪಟ್ಟ ಸಿಬ್ಬಂದಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು, ಸಾರ್ವಜನಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಮ್ಮೂರು ನ್ಯೂಸ್ ಮುಂದಿನ ಹಂತದಲ್ಲಿ ವಿಷಯವನ್ನು ಮತ್ತಷ್ಟು ಪರಿಶೀಲಿಸಿ ವರದಿ ಮಾಡಲಿದೆ.
📑... @✍️ ವರದಿ : ಅಂಬಣ್ಣ ಕುಕನೂರ್