“ಚುಕ್ಕನಕಲ್ಲು ಎಸ್‌ಸಿ ಕಾಲೋನಿಯ ರಸ್ತೆ ಚರಂಡಿ ಸಮಸ್ಯೆ ನಿವಾರಣೆಗೆ ದಲಿತ ಸಂಘರ್ಷ ಸಮಿತಿಯ ಮನವಿ”

News Image

ನಮ್ಮೂರು ನ್ಯೂಸ್ ವರದಿ : ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುಕ್ಕನಕಲ್ಲು ಗ್ರಾಮದ ಎಸ್‌ಸಿ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಥಳೀಯ ನಿವಾಸಿಗಳು ದೀರ್ಘಕಾಲದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಲೋನಿಯಲ್ಲಿ ಸರಿಯಾದ ರಸ್ತೆ, ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛತೆಯ ಕೊರತೆಯಿಂದಾಗಿ ಮಳೆ ನೀರು ಮತ್ತು ಚರಂಡಿ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿದ್ದು, ಜನರ ಆರೋಗ್ಯಕ್ಕೆ ತೀವ್ರವಾದ ಅಪಾಯ ಉಂಟಾಗಿದೆ.


ಈ ಕುರಿತು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣ ಜಿಲ್ಲಾ ಸಮಿತಿಯವರು ಹಲವು ಬಾರಿ ಬಹದ್ದೂರ್ ಬಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ಲಭ್ಯವಾಗಿಲ್ಲ.
ಆದ್ದರಿಂದ, ಜನರ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಸ್ವಚ್ಛ ಹಾಗೂ ಸುರಕ್ಷಿತ ಪರಿಸರವನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಈ ಬಾರಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ಧ್ವನಿ) ಕಾದ್ರೋಳ್ಳಿ ಬಣದ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಜಿ.ಎಸ್. ಬೆಣಕಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕರಿಯಪ್ಪ ಮಣ್ಣಿನವರ, ಜಿಲ್ಲಾ ಸಂಚಾಲಕರಾದ ಮೈಲಪ್ಪ ಮಾದಿನೂರು, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಶಶಿಕಲಾ ಮಠದ, ಯಲಬುರ್ಗಾ ತಾಲ್ಲೂಕು ಉಪಾಧ್ಯಕ್ಷರಾದ ವೀರೇಶ್ ದೊಡ್ಡಮನಿ, ಜೊತೆಗೆ ಚೈತ್ರಾ ಚುಕ್ಕನಕಲ್ಲು, ವಿದ್ಯಾಶ್ರೀ ಚುಕ್ಕನಕಲ್ಲು ಮತ್ತು ಲಕ್ಷ್ಮೀ ಚುಕ್ಕನಕಲ್ಲು ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಜನತೆಗೆ ತಕ್ಷಣ ಪರಿಹಾರ ಒದಗಿಸಲಾಗದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಸಮಿತಿಯ ಪದಾಧಿಕಾರಿಗಳು ಎಚ್ಚರಿಸಿದರು.
📑... @✍️ ವರದಿ ನಿಂಗಪ್ಪ ಜಿ.ಎಸ್. ಬೆಣಕಲ್,