ಕರ್ನಾಟಕದಲ್ಲಿ ಎಸ್.ಸಿ. ಒಳಮೀಸಲು: 3 ದಶಕಗಳ ಬೇಡಿಕೆಗೆ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ

News Image

ನಮ್ಮೂರು ನ್ಯೂಸ್ ಸುದ್ದಿ: ಬೆಂಗಳೂರು: 3 ದಶಕಗಳಿಂದ ಮುಂದುವರಿದಿದ್ದ ಪರಿಶಿಷ್ಟ ಜಾತಿಗಳ ಒಳಮೀಸಲು ಬೇಡಿಕೆಗೆ ಕೊನೆಗೂ ಕರ್ನಾಟಕ ಸರ್ಕಾರ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಮಂಗಳವಾರ ರಾತ್ರಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ವಿಶೇಷ ಅಧಿವೇಶನದಲ್ಲಿ ಚರ್ಚೆಯ ಬಳಿಕ ಸರ್ಕಾರ, ಪರಿಶಿಷ್ಟ ಜಾತಿಗಳೊಳಗಿನ ಮೀಸಲು ಹಂಚಿಕೆಯನ್ನು ವಿಜ್ಞಾನಾಧಾರಿತವಾಗಿ ಜಾರಿಗೊಳಿಸಲು ಅನುಮೋದನೆ ನೀಡಿದೆ. ಈಗ ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಘೋಷಣೆ ಮಾಡುವುದಷ್ಟೇ ಬಾಕಿ.

ಈ ಹಿಂದೆ, ಒಳಮೀಸಲು ಕುರಿತಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವನ್ನು ಸರ್ಕಾರ ರಚಿಸಿತ್ತು. ಆಯೋಗವು ಸಂಪೂರ್ಣ ಅಧ್ಯಯನ ನಡೆಸಿ ಕೆಲ ದಿನಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿಯಲ್ಲಿ 5 ಗುಂಪುಗಳ ವಿಂಗಡಣೆ ಶಿಫಾರಸು ಮಾಡಲಾಗಿದ್ದರೂ, ಸರ್ಕಾರವು 3 ಗುಂಪುಗಳ ವಿಂಗಡಣೆ ಆಧಾರದಲ್ಲಿ ಮೀಸಲು ಹಂಚಿಕೆ ಮಾಡಲು ನಿರ್ಧರಿಸಿದೆ.

ಮೀಸಲು ಹಂಚಿಕೆಯ ಪ್ರಕಾರ:

ಎಸ್.ಸಿ ಎಡಗೈ – 18 ಜಾತಿ: ಶೇ.6

ಎಸ್.ಸಿ ಬಲಗೈ – 20 ಜಾತಿ: ಶೇ.6

ಎಸ್.ಸಿ ಇತರೆ – 63 ಜಾತಿ: ಶೇ.5
ಒಟ್ಟು 101 ಜಾತಿಗಳಿಗೆ ಶೇ.17ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, “ಸಂಪುಟ ತೀರ್ಮಾನ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ವಿವರಿಸುತ್ತಾರೆ. ಎಲ್ಲ ಸಮುದಾಯಗಳಿಗೂ ಸಮಾಧಾನವಾಗುವಂತಹ ಐತಿಹಾಸಿಕ ನಿರ್ಧಾರ ಸರ್ಕಾರ ಕೈಗೊಂಡಿದೆ” ಎಂದು ಹೇಳಿದರು.

ಈ ನಡುವೆ, ಸಚಿವ ಶಿವರಾಜ್ ತಂಗಡಗಿಯವರು, “ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎಲ್ಲರಿಗೂ ತೃಪ್ತಿಪಡುವ ನಿರ್ಧಾರ ಆಗಿದೆ. ಇದು ದಶಕಗಳಿಂದಲೂ ಕಾಯುತ್ತಿದ್ದ ಮಹತ್ವದ ಘಟ್ಟ” ಎಂದು ಪ್ರತಿಕ್ರಿಯೆ ನೀಡಿದರು.

ಒಳಮೀಸಲು ಜಾರಿಗೊಳಿಸುವ ಕುರಿತಂತೆ ಎಡಗೈ ಮತ್ತು ಬಲಗೈ ಸಮುದಾಯಗಳಿಂದ ಹೋರಾಟ-ಪ್ರತಿಭಟನೆಗಳು ನಡೆಯುತ್ತಿದ್ದು, ಹಲವು ಎಚ್ಚರಿಕೆಗಳೂ ಹೊರಬಿದ್ದಿದ್ದವು. ಇಂತಹ ಹಿನ್ನೆಲೆಯಲ್ಲಿ ಸರ್ಕಾರದ ಈ ನಿರ್ಧಾರವು ಮಹತ್ವ ಪಡೆದುಕೊಂಡಿದೆ.

ಪ್ರಸ್ತುತ ವಿಧಾನಸಭೆಯ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲು ಕುರಿತಾಗಿ ಅಧಿಕೃತವಾಗಿ ಸದನಕ್ಕೆ ಮಾಹಿತಿ ನೀಡಲಿದ್ದಾರೆ.