ಹುಲಿಗಿಯಲ್ಲಿ ಮಾಹಿತಿ ಹಕ್ಕು ವೇದಿಕೆಯ ಕೊಪ್ಪಳ ತಾಲೂಕು ಘಟಕ ರಚನೆಗೆ ಪೂರ್ವಭಾವಿ ಸಭೆ

News Image

ನಮ್ಮೂರು ನ್ಯೂಸ್ ವರದಿ :
ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪೀ. ಶಿವನಾರಾಯಣ ಅವರ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ, ಕೊಪ್ಪಳ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ತಾಲೂಕು ಘಟಕ ರಚನೆ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತರ ಮಹತ್ವದ ಪೂರ್ವಭಾವಿ ಸಭೆ ಹುಲಿಗಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯನ್ನು ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಾರ್ವಜನಿಕರಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಸೂಕ್ತ ಅರಿವು ಮೂಡಿಸುವುದು, ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸುವ ಅಗತ್ಯವನ್ನು ಸಭೆಯಲ್ಲಿ ಒತ್ತಿ ಹೇಳಲಾಯಿತು.

ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು, ಇಲಾಖೆಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕ ಹಣದ ಬಳಕೆಯ ಕುರಿತು ಕಾನೂನುಬದ್ಧವಾಗಿ ಮಾಹಿತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿ ಸಾಧನವಾಗಿದ್ದು, ಇದರ ಸದ್ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆಯು ಕಾರ್ಯನಿರ್ವಹಿಸಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ರಮೇಶ್ ಉಳ್ಳಳ್ಳಿ, ಭೀಮೇಶ್ ಸೇರಿದಂತೆ ವೇದಿಕೆಯ ಪ್ರಮುಖ ಮುಖಂಡರು ಹಾಗೂ ಕೊಪ್ಪಳ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಮಾರ್ಕಂಡಪ್ಪ, ರಮೇಶ್, ಅನಿಲ್ ಕುಮಾರ್, ಗುರುಪ್ರಸಾದ್, ಪ್ರಕಾಶ್, ಹನುಮಂತ, ಅಭಿಷೇಕ, ಕನಕರಾಜ, ಪರಶುರಾಮ, ಶಂಕರ, ಕಿರಣ್ ಕುಮಾರ್, ಗುರುರಾಜ್ ಶೆಟ್ಟಿ ಸೇರಿದಂತೆ ಹಲವು ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ದಿನಗಳಲ್ಲಿ ಕೊಪ್ಪಳ ತಾಲೂಕು ಘಟಕವನ್ನು ಸಂಘಟನಾತ್ಮಕವಾಗಿ ಬಲಪಡಿಸಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಮಾಹಿತಿ ಹಕ್ಕು ಕಾಯ್ದೆಯ ಅರಿವು ಮೂಡಿಸುವ ಮೂಲಕ ಸಾರ್ವಜನಿಕರ ಹಕ್ಕುಗಳ ರಕ್ಷಣೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
📑... @✍️ ವರದಿ: ಅಂಬಣ್ಣ ಕುಕುನೂರ್