ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಸೆ.7ರಂದು ಬೀದರ್‌ನಲ್ಲಿ ಬೃಹತ್ ರ‍್ಯಾಲಿ : ವಿನೋದ್ ರತ್ನಾಕರ್

News Image

ಬೀದರ್ : ಜಿಲ್ಲೆಯಲ್ಲಿ ದಲಿತ ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಅನ್ಯಾಯ ಹಾಗೂ ದಬ್ಬಾಳಿಕೆಯನ್ನು ಖಂಡಿಸಿ ಸೆಪ್ಟೆಂಬರ್ 7ರಂದು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ್ ರತ್ನಾಕರ್ ತಿಳಿಸಿದ್ದಾರೆ.
​ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವರ್ಷಗಳಿಂದ ದಲಿತರ ಮೇಲೆ ಅತ್ಯಾಚಾರ, ಕೊಲೆ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಭೀಕರ ಘಟನೆಗಳು ಮರುಕಳಿಸುತ್ತಿವೆ. ಅನೇಕ ಪ್ರಕರಣಗಳಲ್ಲಿ ದೂರು ದಾಖಲಾದರೂ, ಸ್ಥಳೀಯ ರಾಜಕೀಯ ಪ್ರಭಾವಿಗಳ ಹಸ್ತಕ್ಷೇಪ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ. ಈ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು ಹಾಗೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಈ ಬೃಹತ್ ರ್ಯಾಲಿ ಆಯೋಜಿಸಲಾಗಿದೆ ಎಂದರು.
​ಎಸ್ಪಿ ವಿರುದ್ಧ ಆಕ್ರೋಶ:
ಒಕ್ಕೂಟದ ಗೌರವಾಧ್ಯಕ್ಷ ರಾಜಕುಮಾರ್ ಮೂಲಭಾರತಿ ಮಾತನಾಡಿ, "ಹಿಂದೆ ಜಿಲ್ಲೆಯಲ್ಲಿ ದಕ್ಷ ಪೊಲೀಸ್ ವರಿಷ್ಠಾಧಿಕಾರಿಗಳು ಸೇವೆ ಸಲ್ಲಿಸಿದ್ದು, ದಲಿತ ಹೋರಾಟಗಾರರ ಹಕ್ಕುಗಳನ್ನು ಗೌರವಿಸುತ್ತಿದ್ದರು. ಆದರೆ, ಪ್ರಸ್ತುತ ಇರುವ ಎಸ್ಪಿ ಪ್ರದೀಪ್ ಗುಂಟಿ ಅವರಿಗೆ ದಲಿತರು ಮತ್ತು ಅವರ ನ್ಯಾಯಯುತ ಹೋರಾಟ ಕಂಡರೆ ಅಲರ್ಜಿಯಾಗಿದೆ. ಪ್ರಜಾಸತ್ತಾತ್ಮಕ ಹೋರಾಟಗಳನ್ನು ಹತ್ತಿಕ್ಕಲು ಇವರಿಗೆ ಸರ್ಕಾರದಿಂದ ವಿಶೇಷ ಅನುಮತಿ ಸಿಕ್ಕಿದೆಯೇ?" ಎಂದು ಖಾರವಾಗಿ ಪ್ರಶ್ನಿಸಿದರು.
​ಹೋರಾಟಕ್ಕೆ ವ್ಯಾಪಕ ಬೆಂಬಲ:
ದಲಿತ ಹಕ್ಕುಗಳ ರಕ್ಷಣೆಗಾಗಿ ನಡೆಯಲಿರುವ ಈ ಬೃಹತ್ ರ್ಯಾಲಿಯಲ್ಲಿ ಜಿಲ್ಲೆಯ ಮೂಲೆಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ದಲಿತ ಬಂಧುಗಳು, ಹೋರಾಟಗಾರರು ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ.
​ಸುದ್ದಿಗೋಷ್ಠಿಯಲ್ಲಿ ರಾಹುಲ್ ಖಂದಾರೆ, ದಲಿತ್ ಪ್ಯಾಂಥರ್‌ನ ರಾಜ್ಯಾಧ್ಯಕ್ಷ ರಾಹುಲ್ ದಲಾಲೆ, ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ್ ಸಿಂಧೆ, ಮುಖಂಡರಾದ ಗೌತಮ್ ಕಾಂಬಳೆ, ಗೌತಮ್ ಬಗದಲಕರ್, ಪ್ರಕಾಶ್ ರಾವಣ, ಹರ್ಷಿತ್ ದಾಂಡೆಕರ್, ಮಾರುತಿ ಕಾಂಬಳೆ ಹಾಗೂ ದಿಲೀಪಕುಮಾರ್ ವರ್ಮಾ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

📑... @✍️ ವರದಿ ಅಂಬಣ್ಣ ಕುಕನೂರ್